ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್

ಪ್ರವಾದಿ (ಸ) ರ ಪೌತ್ರ ಹಝ್ರತ್ ಹುಸೈನ್ (ರ) ಪರಂಪರೆಯಲ್ಲಿ ಜನಿಸಿದವರಾಗಿದ್ದಾರೆ ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್. ಸಯ್ಯಿದ್ ಹುಸೈನ್ (ರ) ರವರ ಪರಂಪರೆಯಲ್ಲಿ ಪ್ರಶಸ್ತರಾಗಿದ್ದ ಯಮನಿನ ಹಳರ್ ಮೌತಿನಲ್ಲಿ ವಫಾತಾದ ಅಲೀ ಬಿನ್ ಅಬೀಬಕರ್ ಅಸ್ಸಕರಾನ್ (ರ) ಅವರ ಪರಂಪರೆಯ ಹತ್ತನೇ ತಲೆಮಾರಿಗೆ ಸೇರಿದ ಸಯ್ಯಿದ್ ಅಲಿ ಶಿಹಾಬುದ್ದೀನ್ (ರ) ರವರು ಹಿಜ್ರ 1181 ರಲ್ಲಿ ಕೇರಳಕ್ಕೆ ಆಗಮಿಸಿದರು. ಕಣ್ಣೂರು ಜಿಲ್ಲೆಯ ವಳಪಟ್ಟಣದಲ್ಲಾಗಿದೆ ಅವರ ಖಬರ್. ಇವರ ಪುತ್ರ ಸಯ್ಯಿದ್ ಹುಸೈನ್ ಎಂಬವರು ಮಲಪ್ಪುರಂಗೆ ಆಗಮಿಸಿ ಅಲ್ಲೇ ತಂಗಿದರು. ಇವರ ಪುತ್ರ ಸಯ್ಯಿದ್ ಹುಸೈನ್ ಆಟಕೋಯ ತಂಙಳ್ ರವರಾಗಿದೆ ಪಾಣಕ್ಕಾಡಿಗೆ ವಾಸ ಬದಲಿಸಿದ್ದು. ಧಾರ್ಮಿಕ ವಿದ್ವಾಂಸರಾಗಿದ್ದ ಇವರು ಬ್ರಿಟೀಷ್ ವಿರುದ್ಧ ಹೋರಾಟಗಳನ್ನು ಬೆಂಬಲಿಸಿದ ಕಾರಣದಿಂದ 1862 ರಲ್ಲಿ ಬ್ರಿಟೀಷ್ ಅಧಿಕಾರಿಗಳು ವೆಲ್ಲೂರಿಗೆ ಗಡಿಪಾರು ಮಾಡಿದರು. ಇವರ ಪುತ್ರರಾದ ಸಯ್ಯಿದ್ ಮುಹಮ್ಮದ್ ಕುಞ್ಞಿಕ್ಕೋಯ ತಂಙಳ್ ರವರ ಪುತ್ರ ಪುದಿಯ ಮಾಳಿಯೇಕ್ಕಲ್ ಸಯ್ಯಿದ್ ಅಹ್ಮದ್ (ಪಿ.ಎಂ.ಎಸ್.ಎ) ಪೂಕೋಯ ತಂಙಳ್ ಹಾಗೂ ಸಯ್ಯಿದ್ ಹಾಮಿದ್ ಕುಞ್ಞಿ ಸೀದಿಕ್ಕೋಯ ತಂಙಳ್ ರವರ ಪುತ್ರಿ ಸಯ್ಯಿದ ಆಯಿಶ ಚೆರುಕುಞ್ಞಿ ಬೀವಿಯವರ ಮೂರನೆಯ ಮಗನಾಗಿ 1947 ಜೂನ್ 15 ಕ್ಕಾಗಿದೆ ಹೈದರಲಿ ಶಾಬ್ ತಂಙಳ್ ಜನಿಸಿದ್ದು. ಎಳೆಯ ಪ್ರಾಯದಲ್ಲೇ ತಾಯಿ ವಫಾತಾದ್ದರಿಂದ ಪಿತೃ ಸಹೋದರಿ ಮುತ್ತು ಬೀವಿಯ ಸಂರಕ್ಷಣೆಯಲ್ಲಾಗಿತ್ತು ಸಯ್ಯಿದ್ ಹೈದರಲಿ ಶಿಹಾಬ್ ತಂಙಳ್ ರವರ ಬೆಳೆದದ್ದು.
ಆಟಪ್ಪೂ ಎಂದಾಗಿತ್ತು ಅವರು ಹೈದರಲಿ ತಂಙಳ್ ರವರನ್ನು ಕರೆಯುತ್ತಿದ್ದದ್ದು. ಕುಟುಂಬ ಹಾಗೂ ಊರವರಿಗೆ ತಂಙಳರು ಆಟ್ಟಕ್ಕಯಾಗಿದ್ದರು. ಪಾಣಕ್ಕಾಡ್ ದೇವಧಾರ್ ಎಲ್.ಪಿ ಸ್ಕೂಲಿನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿದ ತಂಙಳ್ ಕವರು ಕೋಝಿಕ್ಕೋಡ್ ಮದ್ರಸತುಲ್ ಮುಹಮ್ಮದಿಯ್ಯಾ ಹೈಸ್ಕೂಲಿನಲ್ಲಿ 1959 ರಲ್ಲಿ ಎಸ್.ಎಸ್.ಎಲ್.ಸಿ ಪೂರೈಸಿದರು. ನಂತರ ತಿರುನ್ನಾವಾಯ ಸಮೀಪದ ಕೋನ್ನಲ್ಲೂರಿನಲ್ಲಿ ಮೂರು ವರ್ಷ ದರ್ಸ್ ವಿದ್ಯಾಭ್ಯಾಸ ಪಡೆದರು. ಇತ್ತೀಚಿಗೆ ಮರಣಹೊಂದಿದ ಕಾಟ್ಟಿಪ್ಪರುತ್ತಿ ಕುಞ್ಞಾಲನ್ ಕುಟ್ಟಿ ಮುಸ್ಲಿಯಾರಾಗಿದ್ದರು ಅಲ್ಲಿನ ಗುರು. ಪೊನ್ನಾನಿ ಮಊನತುಲ್ ಇಸ್ಲಾಂ ಅರಬಿಕ್ ಕಾಲೇಜಿನಲ್ಲೂ ಅಲ್ಪ ಕಾಲ ವಿದ್ಯಾಭ್ಯಾಸ. ಪಡೆದರು. ನಂತರ ಪಟ್ಟಿಕ್ಕಾಡ್ ಜಾಮಿಯಾ ನೂರಿಯ್ಯಾ ಅರಬಿಕ್ ಕಾಲೇಜಿಗೆ ಸೇರಿ 1975 ರಲ್ಲಿ ಫೈಝಿ ಪದವಿ ಪಡೆದರು.
ಸೂಫೀವರ್ಯರಾದ ಚಾಪನಂಙಾಡಿ ಬಾಪು ಮುಸ್ಲಿಯಾರ್ ರವರಿಂದಾಗಿತ್ತು ಸನದು ಪಡೆದದ್ದು. ಶೈಖುನಾ ಶಂಸುಲ್ ಉಲಮಾ, ಕೋಟುಮಲ ಅಬೂಬಕರ್ ಮುಸ್ಲಿಯಾರ್, ಕೆ.ಸಿ ಜಮಾಲುದ್ದೀನ್ ಮುಸ್ಲಿಯಾರ್ ಸೇರಿದ ಪ್ರಮುಖರು ಜಾಮಿಯಾದ ಉಸ್ತಾದರುಗಳಾಗಿದ್ದರು. ಶೈಖುನಾ ಕೋಟುಮಲ ಬಾಪು ಉಸ್ತಾದ್ ಸಯ್ಯಿದರ ಸಹಪಾಠಿಯಾಗಿದ್ದರು. 1973 ರಲ್ಲಿ ರೂಪೀಕರಿಸಿದ ಸುನ್ನೀ ಸ್ಟೂಡೆಂಟ್ ಫೆಡರೇಶನ್ (SSF) ನ ಪ್ರಥಮ ಅಧ್ಯಕ್ಷರಾಗಿದ್ದರು ಹೈದರಲಿ ಶಿಹಾಬ್ ತಂಙಳ್. ಚೆಮ್ಮಾಡ್ ದಾರುಲ್ ಹುದಾದ ವಿ.ಸಿ ಡಾ. ಬಹಾವುದ್ದೀನ್ ನದ್ವಿಯಾಗಿದ್ದರು ಪ್ರಧಾನ ಕಾರ್ಯದರ್ಶಿ.
1994 ರಲ್ಲಿ ನೆಡಿಯಿರಿಪ್ಪ್ ಪೋತ್ ವೆಟ್ಟಿಪ್ಪಾರ ಮಹಲ್ಲಲ್ಲಾಗಿತ್ತು ಪ್ರಥಮವಾಗಿ ಖಾಝಿಯಾಗಿ ಅಧಿಕಾರ ಸ್ವೀಕರಿಸಿದ್ದು. ಇಂದು ಕೇರಳದಲ್ಲಿ ಅತೀ ಹೆಚ್ಚು ಮಹಲ್ಲಿನ ಖಾಝೀ ಸ್ಥಾನ ವಹಿಸುತ್ತಿರುವುದೂ ಸಯ್ಯಿದರಾಗಿದ್ದಾರೆ. 1977 ರಲ್ಲಿ ಪುಲ್ಪಟ್ಟ ಪಂಚಾಯತಿನ ಪೂಕೊಳತ್ಚೂರ್ ಮಹಲ್ಲ್ ಮಸೀದಿ ಹಾಗೂ ಮದ್ರಸಾದ ಅಧ್ಯಕ್ಷರಾಗಿ ಆರಂಭಿಸಿದ ತಂಙಳರು ಇಂದು ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯಃ, ಕಡಮೇರಿ ರಹ್ಮಾನಿಯ್ಯಃ, ಚೆಮ್ಮಾಡ್ ದಾರುಲ್ ಹುದಾ, ನಂದಿ ದಾರುಸ್ಸಲಾಂ, ವಳಾಂಜೇರಿ ಮರ್ಕಝ್ ಸೇರಿದ ನೂರಾರೂ ಸಂಸ್ಥೆಗಳ ಅಧ್ಯಕ್ಷ ಪದವಿ ಅಲಂಕರಿಸಿದ್ದರು.
ಸಮಸ್ತ ಕೇರಳ ಜಂಇಯ್ಯತ್ತುಲ್ ಉಲಮ ಉಪಾಧ್ಯಕ್ಷರು, ಸುನ್ನಿ ಯುವ ಜನ ಸಂಘ ರಾಜ್ಯಾಧ್ಯಕ್ಷರು ಸೇರಿದ ಸ್ಥಾನ ವಹಿಸುತ್ತಿರುವಾಗಲೇ ಮುಸ್ಲಿಂ ಲೀಗಿನ ಅಧ್ಯಕ್ಷ ಪದವಿಯನ್ನೂ ಅಲಂಕರಿಸುತ್ತಿದ್ದರು. ಸಹೋದರರಾದ ಉಮರಲಿ ಶಿಹಾಬ್ ತಂಙಳ್ ಹಾಗೂ ಮುಹಮ್ಮದಲಿ ಶಿಹಾಬ್ ತಂಙಳ್ ರವರ ವಿಯೋಗದ ನಂತರ ಅವರ ಜವಾಬ್ಧಾರಿಗಳೆಲ್ಲವೂ ಹೈದರಲಿ ತಂಙಳ್ ರವರಿಗೆ ನಿಭಾಯಿಸಬೇಕಾಯಿತು. ಜಾತ್ಯಾತೀತತೆಯ ಕೊನೆಯ ಪ್ರವಾದಿಯೆಂದು ವಿಶೇಷಿಸಲ್ಪಟ್ಟ ಸಹೋದರ ಸಯ್ಯಿದ್ ಮುಹಮ್ಮದಲಿ ಶಿಹಾಬ್ ತಂಙಳ್ ರವರ ಎಲ್ಲಾ ಗುಣಗಳನ್ನು ಮೈಗೂಡಿಸಿಕೊಂಡ ತಂಙಳರು ಧರ್ಮ ರಾಜಕೀಯ ಭೇಧವನ್ಯೇ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು.
ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಖಿ ತಂಙಳ್, ಮರ್ಹೂಂ ಚಾಪ್ಪನಂಙಾಡಿ ಬಾಪು ಉಸ್ತಾದ್, ಶಂಸುಲ್ ಉಲಮ ಸೇರಿದ ಮಹಾತ್ಮರೊಂದಿಗಿನ ಅವರ ಧೃಢವಾದ ಸಂಬಂಧ ಆಧ್ಯಾತ್ಮಿಕ ರಂಗದಲ್ಲಿನ ಬೆಳವಣಿಗೆಗೆ ಸಹಕಾರಿಯಾಯಿತು. ಸಾವಿರಾರು ಜನರಿಗೆ ಆಧ್ಯಾತ್ಮಿಕತೆಯ ಪ್ರಭೆ ಹರಡಿದ ಮಜ್ಲಿಸುನ್ನೂರ್ ಇಜಾಝತ್ ನೀಡಿದ ಸಯ್ಯಿದರ ಅಗಲುವಿಕೆ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಪಾರತ್ರಿಕ ದರಜಗಳನ್ನು ಅಲ್ಲಾಹನು ವೃಧ್ಧಿಗೊಳಿಸಲಿ. ಅವರ ಜೊತೆಗೆ ಸ್ವರ್ಗದಲ್ಲಿ ಒಗ್ಗೂಡಲು ಅಲ್ಲಾಹನು ತೌಫೀಖ್ ನೀಡಲಿ. ಆಮೀನ್. ಕೊಯಿಲಾಂಡಿಯ ಅಬ್ದುಲ್ಲಾ ಬಾಫಖಿಯವರ ಪುತ್ರಿ ಸಯ್ಯಿದ ಶರೀಫ ಫಾತಿಮ ಝುಹ್ರ ತಂಙಳರ ಪತ್ನಿ. ಮಕ್ಕಳು: ಸಯ್ಯಿದ್ ನಈಂ ಅಲಿ ಶಿಹಾಬ್ ತಂಙಳ್, ಸಯ್ಯಿದ್ ಮುಈನಲಿ ಶಿಹಾಬ್ ತಂಙಳ್, ಸಯ್ಯಿದ ಶರೀಫ ಸಾಜಿದಾ ಬೀವಿ, ಸಯ್ಯಿದ ಶರೀಫ ಝಾಹಿದ ಬೀವಿ.
✍️ ಹಾಶಿಂ ರಹ್ಮಾನಿ ಸಾಲ್ಮರ

Comments