ಮರೆಯಲಾಗದ ಆ ದಿನ...

ಜನವರಿ 10 ಮಂಗಳವಾರ 2:25 ರ ಸಮಯ. ಎಂದಿನಂತೆ ವಾಚನಾಲಯದಿಂದ ದಿನ ಪತ್ರಿಕೆಗಳು ಓದಿ ಕ್ಲಾಸಿಗೆ ಬಂದದ್ದಾಗಿತ್ತು. ವಿದ್ಯಾರ್ಥಿಗಳೆಲ್ಲರೂ ಮುಖ ಮುಖ ನೋಡುತ್ತಿದ್ದಾರೆ... ಅದೇನನ್ನೋ ಕಳಕೊಂಡಂತೆ ಸಹಪಾಠಿಗಳು ಅತ್ತ ಇತ್ತ ನಡೆದಾಡುತ್ತಿದ್ದಾರೆ. ಮತ್ತೂ ನಾನು ಗಮನಿಸಿ ನೋಡಿದಾಗ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ ಕೆಲವರು... ಕೆಲವರು ಭಾವೋದ್ರೇಕರಾಗಿ ಡೆಸ್ಕ್ ಮೇಲೆ ತಲೆಯಿಟ್ಟು ಕುಳಿತಿದ್ದಾರೆ. ರೋಧನದ ಆಕ್ರಂದನ... ನನ್ನ ಕಿವಿಯನ್ನೇ ನಂಬಲಾಗುತ್ತಿಲ್ಲ. ಏನಿದೆಲ್ಲಾ...? ಏನೇನೋ ಮನಸ್ಸಲ್ಲಿ ತೇಲಿ ಬರತೊಡಗಿತು. ಅಲ್ಲ, ಹಾಗಲ್ಲ... ಹಾಗಾಗಿರಬಹುದು... ಹಾಳು ಯೋಚನೆಗೆ ಮಣ್ಣು ಬೀಳಲಿ. ನಾನು ಆಶ್ವಾಸ ಪಡಲು ಶ್ರಮಿಸಿದೆ... ಏನೂ ತಿಳಿಯದೆ ನಾನು ಕ್ಲಾಸಿನ ಹೊರಗೋಡಿದೆ. ರಹ್ಮಾನಿಯಾ ವೈಸ್ ಪ್ರಿನ್ಸಿಪಾಲ್ ಮಾಹಿನ್ ಉಸ್ತಾದ್ ಕಾಲೇಜು ವರಾಂಡದಲ್ಲಿ ಮುಡಿಕ್ಕೋಡ್ ಉಸ್ತಾದರನ್ನು ಅಭಿಮುಖೀಕರಿಸುತ್ತಾ ಗದ್ಗದಿತ ಶಬ್ದದೊಂದಿಗೆ ಹೇಳಿದರು. "ಬಾಪು ಮೊಯ್ಲ್ಯಾರ್ ಮರಿಚ್ಚು..." ಮುಡಿಕ್ಕೋಡ್ ಉಸ್ತಾದ್ ಅದೇನೋ ಸ್ಥoಭೀಭೂತನಾದಂತೆ ಅಲ್ಲೇ ನಿಂತು ಬಿಟ್ಟರು... ಕಣ್ಣೀರನ್ನು ಅವರಿಗೂ ತಡೆಹಿಡಿಯಲಾಗಲಿಲ್ಲ... ಇತ್ತ ನನಗೆ ಆ ಸತ್ಯವನ್ನು ನಂಬಲೇ ಬೇಕಾಯಿತು... ಬೇಸರ, ವ್ಯಥೆ, ದುಃಖ, ದುಮ್ಮನಗಳಿಂದ ಮಾನಸಿಕ ಸ್ಥಿಮಿತವೇ ತಪ್ಪದಂತೆ... ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್... ನಮ್ಮ ಶೈಖುನಾರು ಅಲ್ಲಾಹನ ಕರೆಗೆ ಓಗೊಟ್ಟಿದ್ದಾರೆ... ಆ ಹರಿದುಂಬಿಸುವ ಮಾತುಗಳು ಇನ್ನು ನಮ್ಮ ಕಿವಿಗಳಿಗೆ ಅನ್ಯ... ಆ ಸಬಖಿನ ಸುಂದರ ನಿನಾದ ಇನ್ನಿಲ್ಲ... ಅದು ಹೃದಯ ಹೃದಯಗಳ ಸಂವೇದನೆಯಾಗಿತ್ತು... ಯಾ ಅಲ್ಲಾಹ್... ************************************************************************************************** ಆ ರಂಗ ಇನ್ನೂ ಮನಸ್ಸಿನಿಂದ ಮಾಸಿ ಹೋಗಿಲ್ಲ.. ಪ್ರಸ್ತುತ ಜೀವಿಸುತ್ತಿರುವ ಔಲಿಯಾಗಳಲ್ಲಿ ಪ್ರಮುಖ ಸ್ಥಾನೀಯನಾದ ಶೈಖುನಾ ಅತ್ತಿಪ್ಪಟ್ಟ ಉಸ್ತಾದ್ ಬಾಪು ಉಸ್ತಾದಿನ ಜನಾಝ ನೋಡಲು ಜನಸಂದಣಿಯನ್ನು ದಾಟುತ್ತಾ ಆಗಮಿಸಿದರು... ದುಃಖ ಅದುಮಿ ಹಿಡಿಯಲಾಗದೆ ಕಣ್ಣೀರು ಇಳಿಸುತ್ತಾ... ಅವರಿಗಾಗಿ ಜನಾಝ ಇಟ್ಟಿದ್ದ ಫ್ರೀಝರ್ ಮೇಲ್ಬಾಗಿಲು ತೆರೆಯಲಾಯಿತು. ಅದೇನೋ ಜಪಿಸುತ್ತಾ ತನ್ನ ಕೈಯನ್ನು ಜನಾಝದ ನೆತ್ತಿ ಮೇಲಿಟ್ಟು ಮೆಲ್ಲನೆ ಸವರಿದರು. ಕಿಕ್ಕಿರಿದು ತುಂಬಿದ ಜನರೆಡೆಯಲ್ಲಿ ಫೋಟೋ ಕ್ಲಿಕ್ಕಿಸಲು ಕಾತುರದಿಂದ ಕಾಯುತ್ತಿದ್ದ ಚಾನೆಲ್ ಕ್ಯಾಮೆರಾ ಮ್ಯಾನ್ ಗಳಲ್ಲಿ ಇದು ಮಲಾಇಕ್ ಬಂದಿಳಿಯುವ ಸ್ಥಳವಾಗಿದೆ, ದಯವಿಟ್ಟು ಫೂಟೋ ತೆಗೆಯಬೇಡಿರಿ ಎಂದು ಧಿಟ್ಟಿಸಿದರು. ಅಳುತ್ತಲೇ ಅವರು ಜನಾಝ ನಮಾಝಿಗೆ ನೇತೃತ್ವ ನೀಡಿದರು. ನಂತರ ಅವರು ನಡುಗುವ ಶಬ್ದದೊಂದಿಗೆ ಸಮೂಹ ಪ್ರಾರ್ಥನೆ ನಡೆಸಿದರು. ಅಲ್ಲಾಹುಮ್ಮ ಗ್ಫಿರ್ ಲಹು... ವರ್ ಹoಹು...... ಪಾಣಕ್ಕಾಡ್ ಸಯ್ಯದ್ ಹೆದರಲಿ ಶಿಹಾಬ್ ತಂಙಳ್, ವಾವಾಡ್ ಉಸ್ತಾದ್, ಏಲಂಕುಳಂ ಬಾಪು ಉಸ್ತಾದ್, ಮಾಣಿಯೂರ್ ಉಸ್ತಾದ್ ಸೇರಿದ ಪ್ರಮುಖ ಸೂಫಿಗಳು ನಮಾಝಿಗೆ ನೇತೃತ್ವ ನೀಡಿದರು. ಒಟ್ಟಿಗೆ 39 ಜನಾಝ ನಮಾಝ್ ಗಳು...! ಎಡೆಬಿಡದೆ ಖುರ್ ಆನ್ ಪಾರಾಯಣ. ಒಂದೊಂದೇ ನಮಾಝಿಗೂ ಸಾವಿರ ಗಟ್ಟಲೇ ಜನರು.... ಕೊನೆಯದಾಗಿ ಆ ಮುಖವನ್ನೂಮ್ಮೆ ನೋಡಲು ಕಾತುರದಿಂದ ಕಿಲೋ ಮೀಟರುಗಳಾಚೆಗೆ ಸಾಲಾಗಿ ಜನರು.. ತಮ್ಮ ಸರದಿಯ ಸುಯೋಗ ಕಾಯುತ್ತಾ... ಬಾನಲ್ಲಿ ಮುಗುಳ್ನಗೆ ಸೂಸುತ್ತಿರುವ ನಕ್ಷತ್ರಗಳು..! ನಿದ್ರೆಯ ಮುಸುಕನ್ನು ಹೊದ್ದಬೇಕಾದ ರಾತ್ರಿಯಾಗಿಯೂ ಆ ಸಾಲು ಅದೇ ರೀತಿ ಮುಂದುವರಿಯಿತು. ಆ ಇರುಳಿನ ರಾತ್ರಿಯಲ್ಲೂ ಆ ಪ್ರಕಾಶಮಾನ ಮುಖ ನೋಡುವುದೇ ಅವರ ಅದಮ್ಯ ಬಯಕೆ.. ಶೀತ ತಂಗಾಳಿಯ ತನ್ಮಧ್ಯೆ ಎಲ್ಲವನ್ನು ಕಡೆಗಣಿಸಿ ಅವರು ತಮ್ಮ ಸರದಿ ನಿರೀಕ್ಷಿಸಿ ನಿಂತರು.... ****************************************************************************************************** ರಹ್ಮಾನಿಯಾ ಸೀನಿಯರ್ ಪ್ರೊಫೆಸರ್ ಶೈಖುನಾ ಮುಡಿಕ್ಕೋಡ್ ಉಸ್ತಾದರ ನೆನಪೋಲೆಯಿಂದ ಒಂದು ಅಧ್ಯಾಯ ಅವರು ಹೇಳಿದ್ದು ಹೀಗೆ: "ನಾನು ಜಾಮಿಯಾದಲ್ಲಿ ವಿದ್ಯಾಥಿ೯ಯಾಗಿ ಸೇರಿದ ಮೊದಲನೆಯ ವರ್ಷ. 1963. ಜಾಮಿಯಾದಲ್ಲಿ ಅಧ್ಯಾಪನೆ ನಡೆಸಲು ಅಂದು ಕೋಟುಮಲ ಉಸ್ತಾದ್ ಮತ್ತು ಬೇರೆ ಒಬ್ಬರು ಉಸ್ತಾದರು ಮಾತ್ರ. ಕೋಟುಮಲ ಉಸ್ತಾದರ ಜೊತೆ ಆಡೋಡುತ್ತಿರುವ 11 ರ ಹರೆಯ ಮಗನು... ಮೀಝಾನ್ ಓದುತ್ತಿದ್ದರೂ ಆಟೋಟವೇ ಆ ಬಾಲಕನ ಮುಖ್ಯ ಪರಿಪಾಠದಂತಿತ್ತು. ಮೀಝಾನ್ ಓದುತ್ತಿರುವ ಅವನದೇನು ವೀಝಾನ್ ಕಲಿಯುತ್ತಿದ್ದಾನೆಯೇ ಎಂದು ನನಗೆ ಶಂಕೆ... ಏನಾದರೂ ಅದೊಮ್ಮೆ ಪರೀಕ್ಷಿಸಿಯೇ ಸಿದ್ಧವೆಂದು ನಾನು ಸ್ವಗತ ಮಾಡಿದೆ. ಆ ಬಾಲಕನಲ್ಲಿ ನಾನು ಪರೀಕ್ಷಾರ್ಥ ಅದು ಕೇಳಿಯೇ ಬಿಟ್ಟೆ. 'ಅವರು ಹಲವು ಮಹಿಳೆಯರು ಪ್ರವರ್ತಿಸಿದರು' ಎಂಬುದಕ್ಕೆ ಏನು ಹೇಳುವುದು? ಪ್ರಶ್ನೆ ಮುಗಿಯಲಿಲ್ಲ, ಅಷ್ಟಕ್ಕೆ ಉತ್ತರ ಹೇಳಿದ ಬಾಲಕ. ತನ್ನ ಶಂಕೆ ನಿವಾರಣವಾದರೂ ಬಾಲಕನಲ್ಲಿ ಅದೇ ಅರ್ಥದಲ್ಲಿ ಮತ್ತೊಂದು ಪದ ಹೇಳಬಲ್ಲಿಯಾ ಎಂದು ಕೇಳಿದೆ. ಅದಕ್ಕೂ ಧಿಡೀರನೇ ಉತ್ತರ ಹೇಳಿ ಮತ್ತೂ ಆ ಬಾಲಕ ನನ್ನನ್ನು ಅದ್ಭುತಪಡಿಸಿದನು. ಹೇಗಾದರೂ ನಾನು ಸೋತು ಬಿಟ್ಟೆ..." ಬಾಲ್ಯದಲ್ಲೇ ಬಾಪು ಉಸ್ತಾದ್ ಕುಶಾಗ್ರ ಬುದ್ಧಿ ಸಾಮರ್ಥ್ಯ ಹೊಂದಿದ್ದರೆಂಬುದಕ್ಕೆ ಪುರಾವೆ ಈ ಮಾತುಗಳು. ***************************************************************************************************
ಅರಿವಿನಾಳದ ಕೇರಳೀಯ ಮುಖ ಸಮಸ್ತ ಉಪಾಧ್ಯಕ್ಷರಾಗಿದ್ದ ಶೈಖುನಾ ಕೋಟುಮಲ ಅಬೂಬಕರ್ ಮುಸ್ಲಿಯಾರ್ ರವರು ಹಾಗೂ ಸಮಸ್ತದ ಪ್ರಥಮ ಮುಶಾವರ ಸಭೆ ಸದಸ್ಯರಾಗಿದ್ದ ಅರಿವಿನ ಗರಿಮೆ ಕೋಮು ಮುಸ್ಲಿಯಾರ್ ರವರ ಸುಪುತ್ರಿ ಫಾತಿಮಾ ಹಜ್ಜುಮ್ಮರವರ ಪುತ್ರನಾಗಿ 1952 ರ ಫೆಬ್ರವರಿ 10 ರಂದು ಜನ್ಮ ತಾಳಿದ ಶೈಖುನಾರಿಗೆ ಆಧ್ಯಾತ್ಮಿಕತೆಯ ನೀಲಾಕಾಶದಲ್ಲಿ ಮಿಂಚಿ ನಿಂತ ಪ್ರಶೋಭಿತ ತಾರೆ ಚಾಪನಙಾಡಿ ಬಾಪು ಮುಸ್ಲಿಯಾರರ ಸುಪುತ್ರಿಯನ್ನು ಜೀವನ ಸಂಗಾತಿಯಾಗಿಸಲು ಅಲ್ಲಾಹನು ಸೌಭಾಗ್ಯ ನೀಡಿದನು. 11ನೇ ವಯಸ್ಸಿನಲ್ಲಿ ಜಾಮಿಯಾ ನೂರಿಯಾದಲ್ಲಿ ತಂದೆಯ ಅಧ್ಯಾಪನೆಯೊಂದಿಗೆ ವಿದ್ಯಾಥಿ೯ ಜೀವನ ಪ್ರಾರಂಭಿಸಿದ ಅವರು ಕೆ.ಕೆ. ಹಝ್ರತ್ ಮತ್ತು ಶಂಸುಲ್ ಉಲಮಾರವರ ಆರೈಕೆಯೊಂದಿಗೆ ವಿದ್ಯೆಯ ಮೊದಲ ಹೆಬ್ಬಾಗಿಲುಗಳು ದಾಟಿ ಹೋದರು. ನಂತರ ಆಲತ್ತೂರ್ ಪಡಿ ದರ್ಸ್ ಹಾಗೂ ಪೊಟ್ಟಿಚ್ಚಿರ ಅನ್ವರಿಯಾದಲ್ಲಿ ಅಧ್ಯಯನ ಮುಂದುವರಿಸಿದರು. 1973 ರಲ್ಲಿ ಮತ್ತೊಮ್ಮೆ ಜಾಮಿಅಃ ನೂರಿಯಾ ಸೇರಿ 1975 ರಲ್ಲಿ ಪೈಝ ಬಿರುದು ಪಡೆದರು. ಅಧ್ಯಯನದ ನಂತರ ವಿವಿಧ ಸಂವಾದ ವೇದಿಕೆಗಳಲ್ಲಿ ಇ.ಕೆ ಹಸನ್ ಮುಸ್ಲಿಯಾರರೊಂದಿಗೆ ಭಾಗಿಯಾಗಿ ಸುನ್ನತ್ ಜಮಾಅತ್ತಿನ ಕಾವಲಾಳಾಗಿ ಕಾರ್ಯಾಚರಿಸಲು ಅವರಿಂದಾಯಿತು. ವೇಳೂರ್ ಜುಮಾ ಮಸೀದಿ ಸೇರಿದ ವಿವಿದೆಡೆಗಳಲ್ಲಿ ಅಧ್ಯಾಪನೆ ನಡೆಸಿದ ಅವರು ತಂದೆಯ ನಿರ್ದೇಶದಂತೆ ನಂದಿ ದಾರುಸ್ಸಲಾಮಿನಲ್ಲೂ ನಂತರ ಕಡಮೇರಿ ರಹ್ಮಾನಿಯಾದಲ್ಲೂ ಸೇವನ ನಿರತರಾದರು. ಚೀಕಿಲೋಟ್ ಕುಞ್ಞಮ್ಮದ್ ಮುಸ್ಲಿಯಾರ್ ಹಾಗೂ ಎo.ಎಂ ಬಶೀರ್ ಮುಸ್ಲಿಯಾರ್ ರವರ ಧಾರ್ಮಿಕ ಹಾಗೂ ಲೌಕಿಕ ಸಮನ್ವಯ ವಿದ್ಯಾಭ್ಯಾಸವೆಂಬ ಯೋಜನೆಯನ್ನು ಸಮಗ್ರ ರೀತಿಯಲ್ಲಿ ಕಡಮೇರಿ ರಹ್ಮಾನಿಯದಲ್ಲಿ ಕಾರ್ಯರೂಪಕ್ಕೆ ತರುವುದರಲ್ಲಿ ಬಾಪು ಮುಸ್ಲಿಯಾರ್ ಯಶಸ್ವಿ ಕಂಡರು. ಕೇವಲ 5 ಸೆಂಟ್ಸ್ ಸ್ಥಳದಲ್ಲಿ ಸೀಮಿತವಾಗಿದ್ದ ರಹ್ಮಾನಿಯಾವನ್ನು 20 ಏಕರೆಗಳಲ್ಲಿ ತಲೆಯೆತ್ತಿ ನಿಂತಿರುವ ವಿಶಾಲ ಕ್ಯಾಂಪಸ್ ಸಮುಚ್ಚಯವಾಗಿ ಪರಿವರ್ತಿಸುವುದರಲ್ಲಿ ಅವರೇ ಮುಖ್ಯ ಹೇತುವಾಗಿದ್ದರು. ಯಾವುದೇ ಮಸ್ಅಲಗಳಿಗೆ ಪರಿಹಾರ ಕಾಣಲು ಜನ ಸಮಸ್ತವನ್ನು ಸಮೀಪಿಸಿದರೆ ಫತ್ವಾ ಕಮಿಟಿ ಕಣ್ವೀನರ್ ಎಂಬ ನಿಟ್ಟಿನಲ್ಲಿ ಅರಿವಿನಾಳಕ್ಕೆ ಧುಮುಕಿದ ಅಧ್ಭುತ ಪಂಡಿತ. ತಾನು ಚೆಯರ್ ಮ್ಯಾನ್ ಆಗಿರುವ 'ಸುಪ್ರಭಾತ' ಪತ್ರಿಕೆಯ ಕಾರ್ಯಾಲಯದಲ್ಲಾದರೆ ಪತ್ರಿಕೋದ್ಯಮದಲ್ಲಿ ಅನುಭವಿಗಳಾದ ಉದ್ಯೋಗಸ್ತರ ಮುಂದೆ ಪರಿಪೂರ್ಣ ಮಾಧ್ಯಮ ವಿದ್ಯಾಭ್ಯಾಸ ಪಡೆದ ಬಿರುದದಾರಿಯಂತೆ ಕಾರ್ಯ ಚತುರರಾದ ಚುರುಕ. ತನ್ನ ಉತ್ತರಾಧಿಕಾರತ್ವದಲ್ಲಿ ಮುಂದೆ ಸಾಗುತ್ತಿರುವ MEA ಇಂಜಿನಿಯರಿಂಗ್ ಕಾಲೇಜು ತಲುಪಿದರೆ ಕೋಟು ಸೂಟು ಧರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮಾರ್ಗನಿರ್ದೇಶನ ನೀಡುವ ಮಾರ್ಗದರ್ಶಕ. ಕಡಮೇರಿ ರಹ್ಮಾನಿಯಾ ಸೇರಿದರೆ ಅಧ್ಯಾಪನೆಗೆ ಬೇಕಾದ ಸರ್ವವನ್ನೂ ಹೊಂದಿಕೊಂಡ ಅಧ್ಯಾಪಕ. ನೆಡುಂಬಾಶೇರಿ ಹಜ್ಜ್ ಕ್ಯಾಂಪಿನಲ್ಲಾದರೆ ಅಲ್ಲಾಹನ ಅತಿಥಿಗಳಾದ ಹಜ್ಜಾಜುಗಳ ಸೇವನೆ ಗೈಯ್ಯುವ ಸ್ವಯಂ ಸೇವಕ. ಇದಲ್ಲವೂ ಅಡಗಿದ್ದು ಅದೊಂದೇ ಮನುಷ್ಯನಲ್ಲಿ... ಯಾರನ್ನು ನೋಯಿಸದೆ, ಯಾರನ್ನೂ ಕಡೆಗಣಿಸದೆ ಎಲ್ಲರನ್ನೂ ಪರಿಗಣಿಸಿ ಎಲ್ಲರಿoದಲೂ ಪರಿಗಣಿಸಲ್ಪಟ್ಟವರು ಅವರು. ಆಷಾಡುಭೂತಿಯ ಉಡುಗೆ ತೊಡಿಗೆಗಳಿಲ್ಲದೆ ನಮುನ್ನತ ಗಳಲ್ಲಿ ಪ್ರಶೋಭಿಸಿದ ಸಮುದಾಯ ಮಾರ್ಗದರ್ಶಕ.... ತಾಳಲಾರದ ದುಮ್ಮನಗಳೊಂದಿಗೆ ತನ್ನನ್ನು ಸಮೀಪಿಸುವವರಿಗೆ ಅವರ ಮಂದಹಾಸವೇ ಪರಿಹಾರವಾಗುತ್ತಿತ್ತು. ಅದೆಷ್ಟೋ ಸಲ ಅದು ಶಿಷ್ಯರಾದ ನಾವು ನೇರವಾಗಿಯೇ ಅನುಭವಿಸಿದ್ದೇವೆ. ಅವರ ನಸೀಹತುಗಳಲ್ಲಿ ಆಧ್ಯಾತ್ಮಿಕ ವಿಚಾರಗಳೇ ವಿಷಯವಾಗುತ್ತುತ್ತಿದ್ದವು. ಹೆಚ್ಚಾಗಿ ಶೈಖ್ ಜೀಲಾನಿಯೇ ಅವರ ಕಥಾಪಾತ್ರ. ಅದಾಗಿರಬಹುದು ಶೈಖ್ ಜೀಲಾನಿಯ ವಫಾತ್ ದಿನವೇ ಅವರಿಗೆ ಅಲ್ಲಾಹನ ಸನ್ನಿಧಿಗೆ ಹೋಗಲು ಸೌಭಾಗ್ಯ ಲಭಿಸಿದ್ದಕ್ಕೆ ಹೇತು. ವಿಚಾರಗಳನ್ನು ನಿಷ್ಟೆಯೂoದಿಗೆ ಮಾಡಿ ಮುಗಿಸುವುದರಲ್ಲಿ ಅವರಿಗೆ ಕಡ್ಡಾಯ ಬುದ್ಧಿಯಾಗಿತ್ತು. ಮುತಅಲ್ಲಿಮರಾಗಿ ತಮ್ಮ ವೇಷವಿಧಾನ ಬದಲಾವಣೆ ಮಾಡುವವರೊಂದಿಗೆ ಅವರ ನಿಲುವು ಕಟುವಾಗಿತ್ತು. ತಮ್ಮ ತಮ್ಮ ಶಿಆರನ್ನು ತಾವು ಉಪೇಕ್ಷಿಸಬಾರದೆಂಬುದೇ ಉಸ್ತಾದರ ನಿಲುವು. **************************************************************************************** ಉಸ್ತಾದರು ತನ್ನ ಜೀವನದ ಸಂಧ್ಯಾ ಸಮಯದಲ್ಲೂ ಸಮಸ್ತಕ್ಕಾಗಿ ಮೈ ಮರೆದು ದುಡಿದರು. ಮಲಪ್ಪುರಂನಲ್ಲಿ ನಡೆದ ಶರೀಅತ್ ಸಂರಕ್ಷಣಾ ಬೃಹತ್ ಜಾಥಾದ ಮುಂಚಿನ ಎರಡು ದಿನಗಳು ಅನಾರೋಗ್ಯ ಕಾರಣ ಉಸ್ತಾದರು ಆಸ್ಪತ್ರೆಗೆ ದಾಖಲಾಗಿದ್ದರು. ಶರೀಅತ್ತಿನ ಕಾರ್ಯಕ್ರಮಕ್ಕೆoದೇ ಆ ದಿನದಂದು ಡಿಸ್ಚಾರ್ಜ್ ಮಾಡಿಸಿ ಜಾಥಾದಲ್ಲಿ ಪಾಲ್ಗೊಂಡರು. ಕೊನೆಯ ಸಮ್ಮೇಳನ ನಡೆಯುವ ವೇದಿಕೆಗೆ ನೇರವಾಗಿಯೇ ಹೋಗಬಹುದಾದರೂ ಉಸ್ತಾದರು ಜಾಥಾ ಪ್ರಾರಂಭವಾಗುವ ಕುನ್ನುಮ್ಮಲಿನಿಂದ ಸುನ್ನಿ ಮಹಲ್ ತನಕ ಸುಮಾರು 2.5 km ದೂರ ಕಾಲ್ನಡಿಗೆಯಾಗಿಯೇ ಸಾಗಿದರು. ಎಲ್ಲವೂ ಸಮುದಾಯಕ್ಕಾಗಿ. ಅನಾರೋಗ್ಯವನ್ನು ಕಡೆಗಣಿಸಿ ಸಮುದಾಯಕ್ಕಾಗಿ ಜೀವಿಸಿದ ಸಾಕ್ಷಾತ್ ಸಮಸ್ತದ ಜೀವಾಳ ಎನಿಸಿದ ಅವರಿಗೆ ಆರು ತಿಂಗಳಿಗೊಮ್ಮೆ ಕೊಚ್ಚಿಯಲ್ಲಿನ ಡಾಕ್ಟರನ್ನು ಕಾಣಬೇಕೆಂಬ ನಿರ್ದೇಶವನ್ನು ಸಮಸ್ತಕ್ಕೆ ಬೇಕಾಗಿ ಓಡಾಡುವ ನಡುವೆ ನಿಷ್ಟೆಯೊಂದಿಗೆ ಪಾಲಿಸಲು ಸಾಧಿಸುತ್ತಿರಲಿಲ್ಲ. ರಹ್ಮಾನಿಯಾ ಅರಬಿಕ್ ಕಾಲೇಜಿನ ಪ್ರಾಂಶುಪಾಲರಾಗಿದ್ದ ಶೈಖುನಾ ಕಾಲೇಜಿನ ಕೆಲವು ಅಗತ್ಯಗಳಿಗಾಗಿ ಯು.ಎ.ಇ ಪ್ರವಾಸ ಗೈದು ರಹ್ಮಾನಿಯಾದ ಸ್ಥಿರ ವರಮಾನಕ್ಕಾಗಿ ಕೊಚ್ಚಿಯ ಮಲ್ಲಾರ್ಪಾಡದಲ್ಲಿ ನಿರ್ಮಾಣ ಹಂತದಲ್ಲಿರುವ ಗೋಡೌನಿಗೆ ಬೇಕಾದ ಧನ ಸಮಾಹರಣೆಗಾಗಿ ಬೇಕಾದ ಕಾರ್ಯಾಗಾರಗಳನ್ನು ನಡೆಸಿ ಕೆಲವು ದಿನಗಳು ಅಲ್ಲೇ ತಂಗಿದ್ದರು. ಊರಿಗೆ ಮರಳುವ ಕೊನೆಯ ದಿನ ರೂಮಿಗೆ ಬರುವಾಗಲೇ ಘಂಟೆ 2:O0 ಆಗಿತ್ತು. ನಂತರ ಜೊತೆಗಿದ್ದವರೊಂದಿಗೆ ಮಾತುಕತೆ ಮುಗಿಸಿ ಮಲಗುವಾಗ ಘಂಟೆ 4:00. ಸುಬುಹಿ ನಮಾಝಿಗಾಗಿ ಏಳುವಾಗ 5 ಘoಟೆ. ಮತ್ತೂ ರೂಮಿನಲ್ಲಿ ಸಂದರ್ಶಕರ ಹಿಟ್ಟು. ಎಲ್ಲರನ್ನು ಬೀಳಕೊಟ್ಟು ಏರ್ಪೋರ್ಟ್ ತಲುಪುವಾಗ 8:00 ಗಂಟೆ. ಊರಿಗೆ ತೆರಳುವ ವಿಮಾನ 11:00 ಘಂಟೆಗಾಗಿತ್ತು. ಒಟ್ಟಿಗೆ ಕೊಚ್ಚಿಯ ನೆಡುಂಬಾಶೇರಿ ವಿಮಾನ ನಿಲ್ದಾಣಕ್ಕೆ ತಲುಪುವಾಗ ಸಮಯ 4:00 ಘಂಟೆಯಾಗಿತ್ತು. ಐದಾರು ವಿಮಾನಗಳು ಒಟ್ಟಿಗೆ ಬಂದಿಳಿದ ಕಾರಣ ಲಗೕಜ್ ಕೈ ಸೇರಲು ಇನ್ನೂ ನಾಲ್ಕು ಘಂಟೆ ಕಾಯಬೇಕಾಯಿತು. ಹಗಲಿರುಳು ಬಿಡುವಿಲ್ಲದೆ ಸಮುದಾಕ್ಕಾಗಿ ಅರ್ಪಿಸಿದ ಉಸ್ತಾದರ ಜೀವನದ ಒಂದು ದಿನದ ಚಿತ್ರ ಮಾತ್ರವಿದು. ಹೀಗೆ ಅದೆಷ್ಟು ರಾತ್ರಿಗಳು....!! ಗಲ್ಫ್ ಸಂದರ್ಶನದ ಬಳಿಕ ಅದೇನೋ ಅಸ್ವಸ್ಥತೆಗಳು ಉಸ್ತಾದರನ್ನು ಕಾಡ ತೊಡಗಿತು. ಕೆಮ್ಮು ಜ್ವರ ಕಾರಣ ಚುಕ್ಕಾಪಿ ಕುಡಿದು ಆರೋಗ್ಯ ಮರಳಿ ಪಡೆಯಲು ಪ್ರಯತ್ನಿಸಿದ ಉಸ್ತಾದರಿಗೆ ಇನ್ನಷ್ಟು ರೋಗ ವೃದ್ಧಿಯಾಗುತ್ತಲಿತ್ತು. ವಾಂತಿ ಮತ್ತು ನಡುಗು ಅವರ ರೋಗ ತೀವ್ರತೆಯನ್ನು ಬಯಲು ಪಡಿಸಿತು. ವಿವಿಧ ಪ್ರದೇಶಗಳಿಂದ ವ್ಯತ್ಯಸ್ತ ಕಾರ್ಯಕ್ರಮಗಳಿಗಾಗಿ ಆಹ್ವಾನಿಸಲು ಸಂಘಟನಾ ಕಾರ್ಯಕರ್ತರು ಮನೆಗೆ ಬರುವಾಗ ಅವರೊಂದಿಗೆ ಮಾತನಾಡಿ ಸಮಾಧಾನಪಡಿಸಿ ಕಾರ್ಯಕ್ರಮಕ್ಕೆ ಡೇಟ್ ನೀಡುತ್ತಿದ್ದರು. ಕೈಯ ನಡುಗು ಕಾರಣ ತನ್ನ ಡೈರಿಯಲ್ಲಿ ಬರೆಯಲಸಾಧ್ಯವಾದಾಗ ಬಂದವರಲ್ಲೇ ಸ್ವತಃ ಬರೆಯಲು ಉಸ್ತಾದ್ ನಿರ್ದೇಶಿಸಿದರು. ಅದಷ್ಟು ಪ್ರಿಯವಾಗಿತ್ತು ಅವರಿಗೆ ಸಮಸ್ತದ ಕಾರ್ಯಕರ್ತರೂಂದಿಗೆ. ರೋಗಗ್ರಸ್ತನಾದ ಉಸ್ತಾದರ ಆರೋಗ್ಯ ಸ್ಥಿತಿ ಕಂಡು ಸಹಧರ್ಮಿಣಿ ಆತಂಕದಿಂದ ಉಸ್ತಾದರೊಂದಿಗೆ ಕೋಝಿಕ್ಕೊಡಿನ ಮಿಂಸ್ ಆಸ್ಪತ್ರೆಗೆ ಚೆಕ್ ಅಪಿಗಾಗಿ ತೆರಳಲು ಸಲಹೆ ನೀಡಿದರು. ಅದರಂತೆ ವಿಂಸಿನಲ್ಲಿ ಚೆಕ್ಅಪ್ ನಡೆಸಿದಾಗ ಶ್ವಾಸಕೋಶಕ್ಕೆ ನೀರಿಳಿದದ್ದು ತಿಳಿಯಿತು. ಅದರಂತೆ ಅಲ್ಲೇ ಅಡ್ಮಿಟ್ ಮಾಡಲು ಡಾಕ್ಟರುಗಳು ಮುಂದಾದರು. ದಿನ ಕಳೆದಂತೆಯೇ ಉಸ್ತಾದರ ಆರೋಗ್ಯ ಹದಗೆಡುತ್ತಲೇ ಹೋಯಿತು. ಚಿಕಿತ್ಸೆಯೆಡೆಯಲ್ಲೂಮ್ಮೆ ಆರೋಗ್ಯ ತಾಳಿದರಾದರೂ ಮತ್ತೂ ಪೂರ್ವ ಸ್ಥಿತಿಗೆ ಮರಳಿತು. ರೋಗ ಶಮನಕ್ಕಾಗಿ ಪ್ರಾರ್ಥಿಸಲು ಹೈದರಲಿ ಶಿಹಾಬ್ ತಂಙಳ್ ಸೇರಿದ ಸಮಸ್ತ ನೇತಾರರ ಆಹ್ವಾನ ಪತ್ರಿಕೆಗಳಲ್ಲಿ ಬರತೊದಗಿತು. ಸಮಸ್ತದ ಎಲ್ಲಾ ಕಾರ್ಯಕ್ರಮಗಳಲ್ಲಿ ಉಸ್ತಾದರಿಗಾಗಿ ವಿಶೇಷ ಪ್ರಾರ್ಥನೆ ನಡೆಯಲಾಯಿತು. ರಹ್ಮಾನಿಯಾದಲ್ಲಿ ಎಲ್ಲಾ ನಮಾಝಿನ ಬಳಿಕ ಪ್ರತ್ಯೇಕ ಪ್ರಾರ್ಥನೆ ಅಲ್ಲದೆ ಖುರ್ ಆನ್ ಪಾರಾಯಣ ಎಲ್ಲವೂ ನೆರವೇರಿತು. ಆದರೆ ಅಲ್ಲಾಹನ ವಿಧಿ ಮಾತ್ರ ಮತ್ತೊoದಾಗಿತ್ತು. ಉಸ್ತಾದರಿಗೆ ಖೈರಾದದ್ದನ್ನು ಅವನು ವಿಧಿಸಿದನು. ಸಮುದಾಯ ಅನಾಥವಾದರೂ ಉಸ್ತಾದರು ಸಮುದಾಯಕ್ಕೆ ಮಾಡಿದ ಸತ್ಕಾರ್ಯಗಳ ಧನ್ಯತೆಯೊಂದಿಗೆ ಅಲ್ಲಾಹನೆಡೆಗೆ ಯಾತ್ರೆಯಾದರು... ಉಸ್ತಾದರ ಕೊನೆಯ ಸಮಯದಲ್ಲಿ ಆಸ್ಪತ್ರೆಯಲ್ಲಿದ್ದ ಉಸ್ತಾದಿನ ಮಕ್ಕಳು ಕೋಝಿಕೋಡ್ ಖಾಝಿ ಜಮಲುಲ್ಲೈಲಿ ತಂಙಳನ್ನು ಆಸ್ಪತ್ರೆಗೆ ಕರೆಸಿದರು. ಉಸ್ತಾದಿನ ಸ್ಥಿತಿ ಕಂಡು ಮರಣವಾಸನ್ನವಾಗಿದೆಯೆಂದು ಮನಗಂಡ ತಂಙಳ್ ಯಾಸೀನ್ ಓದಲಾರಂಭಿಸಿದರು. ಹಾಗೆ ಐದು ಸಲ ಯಾಸೀನ್ ಓದಿದ ನಂತರ ಉಸ್ತಾದರಿಗೆ ಕಲಿಮಃ ವಚನ ಲಾ ಇಲಾಹ ಇಲ್ಲಲ್ಲಾಹ್ ಹೇಳಿ ಕೊಟ್ಟರು. ಆದ್ಭುತವೆಂಬತೆ ಅದುವರೆಗೂ ತುಟಿ ಅಲುಗಾಡಿಸಲಾಗದ ಉಸ್ತಾದರ ತುಟಿಗಳು ಕಲಿಮ ವಚನಗಳಿಂದ ಸಚಲವಾಯಿತು. ಹಾಗೆ... ಇನ್ನಾ ಲಿಲ್ಲಾಹಿ ವ ಇನ್ನಾ ಇಲೈಹಿ ರಾಜಿಊನ್... ಶಂಸುಲ್ ಉಲಮಾ, ಕಣ್ಣಿಯತ್ ಉಸ್ತಾದ್, ಕಾಳಂಬಾಡಿ ಉಸ್ತಾದ್, ಚೆರುಶ್ಶೇರಿ ಉಸ್ತಾದ್,‌ ಕುಮರಂ ಪುತ್ತೂರ್ ಉಸ್ತಾದ್ ಅವರ ಸಾಲಿಗೆ ಬಾಪು ಉಸ್ತಾದರೂ ಸೇರಿದರು. ಅಲ್ಲಾಹು ಅವರೊಂದಿಗೆ ನಾಳೆ ನಮಗೂ ಸ್ವರ್ಗದಲ್ಲಿ ಸ್ಥಾನ ಒದಗಿಸಲಿ... ಆಮೀನ್. @ ಎಂ.ಎಂ.ಹಾಶಿಂ ಸಾಲ್ಮರ

Comments

Post a Comment