ಪ್ರಜಾಪ್ರಭುತ್ವ ಎದುರಿಸುತ್ತಿರುವ ಸವಾಲುಗಳು

ಇತಿಹಾಸದುದ್ದಕ್ಕೂ ಏಕಾಧಿಪತ್ಯ, ರಾಜಾಡಳಿತ, ಸೈನಿಕ ಆಡಳಿತಗಳನ್ನು ಕಂಡ ಜಗತ್ತು, ಕೊನೆಗೆ ಪ್ರಜೆಯನ್ನೇ ಪ್ರಭುವಾಗಿಸುವ ಪ್ರಜಾಪ್ರಭುತ್ವ ವ್ಯವಸ್ಥೆಯೇ ಎಂದಿಗೂ ಸ್ಥಾಯಿ ಹಾಗೂ ಸುರಕ್ಷಿತವೆಂದು ಕಂಡು ಮುನ್ನಡೆಯುತ್ತಿದೆ. ಅಬ್ರಾಹಂ ಲಿಂಕನ್ ಹೇಳುವಂತೆ "ಪ್ರಜೆಗಳಿಂದ ಪ್ರಜೆಗಳಿಗೋಸ್ಕರ ರಚಿತವಾದ ಪ್ರಜೆಗಳ ಸರಕಾರವೇ ಪ್ರಜಾಪ್ರಭುತ್ವ" ಇಂದು ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲೂ ಪ್ರಜಾಪ್ರಭುತ್ವ ಮಾದರಿಯ ಸರ್ಕಾರಗಳು ಆಡಳಿತ ನಡೆಸುತ್ತಿದೆ. ಸೋವಿಯಟ್ ಯೂನಿಯನಿನ ಪತನವೂ ಚೀನಾದಿಂದ ಕೇಳಿ ಬರುತ್ತಿರುವ ಕೂಗೂ ಕೊರಿಯಾದ ಕೊರಗೂ ಲಿಬಿಯಾದ ದಂಗೆಯೂ ಪ್ರಜಾಪ್ರಭುತ್ವಕ್ಕಾಗಿ ಹಾತೊರೊಯುವುದಾಗಿತ್ತು. ಜಾಗತಿಕ ಮಟ್ಟದಲ್ಲಿ ಇತ್ತೀಚೆಗೆ ನಡೆದ ಎಲ್ಲಾ ಹೋರಾಟಗಳು ಪ್ರಜಾಪ್ರಭುತ್ವ ಸಂಸ್ಥಾಪನೆಗೋ ಅದರ ಸಂರಕ್ಷಣೆಗೋ ಆಗಿತ್ತು. ಎಲ್ಲರ ಬಯಕೆಯಾದ ಪ್ರಜಾಪ್ರಭುತ್ವವಂತೂ ಸ್ಥಾಪಿಸುವುದೋ ಉಳಿಸಿಕೊಳ್ಳುವುದೋ ಸುಲಭದ ಮಾತಲ್ಲ. ಇದರ ಯಶಸ್ಸು ಮತದಾರನ ಪ್ರಜ್ಞಾವಂತಿಕೆ ಮತ್ತು ಹೊಣೆಗಾರಿಕೆಯಲ್ಲಾಗಿದೆ. ಎಲ್ಲಿ ಮತದಾರ ಎಡವುತ್ತಾನೋ ಅಲ್ಲಿ ಪ್ರಜಾಪ್ರಭುತ್ವ ಸೋಲುತ್ತದೆ. ವಿವಧ ಭಾಷಾಸಮೂಹಗಳು, ಧರ್ಮಗಳು, ಜಾತಿಗಳು, ಸಂಸ್ಕೃತಿಗಳಿಂದ ಕೊಡಿದ ಭಾರತ ಅತ್ಯಂತ ಸಂಕೀರ್ಣವೆನಿಸಿಕೊಂಡರೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮುನ್ನಡೆಯುತ್ತಿದೆಯೆಂಬುದು ಅತ್ಯಂತ ವಿಸ್ಮಯದಿಂದ ಜಾಗತಿಕಮಟ್ಟದ ನಿರೀಕ್ಷಕರು ನೋಡುತ್ತಿದ್ದಾರೆ. ಒಂದೆಡೆ, ಇಂತಹ ಸಂಕೀರ್ಣವಾದ ಸೋವಿಯಟ್ ಯೂನಿಯನಿನಂತಹ ರಾಷ್ಟ್ರ ವಿವಿಧ ದೇಶಗಳಾಗಿ ವಿಂಗಡನೆಗೊಂಡ ಚರಿತ್ರೆಯಿರುವಾಗ ಮತ್ತೊಂದೆಡೆ, ಭಾರತದಂತೆಯೇ ಶತಮಾನಗಳು ವೈದೇಶಕ ಕಾಲನಿಯಾಗಿದ್ದ ಏಶ್ಯ, ಆಫ್ರಿಕಾ, ಲ್ಯಾಟಿನ್ ಅಮೇರಿಕಾದ ರಾಷ್ಟ್ರಗಳು ಏಕಾಧಿಪತ್ಯವೋ ಪ್ರಜಾಪ್ರಭುತ್ವ ವಿರುದ್ಧವಾದ ಮಾದರಿಯಲ್ಲೋ ಮುನ್ನೆಡೆಯುತ್ತಿರುವಾಗ ಭಾರತ ಜಗತ್ತಿಗೆ ಮಾದರಿಯಾಗಿ ನಿಂತಿದೆ. ಇದಕ್ಕೆ ಕಾರಣ ಭಾರತದ ಬಲಿಷ್ಟವಾದ ಸಂವಿಧಾನವಾಗಿದೆ. ಭಾರತ ಪ್ರಜಾ ಪ್ರಭುತ್ವ ರಾಷ್ಟ್ರವಾಗಿ ಘೋಷಣೆಗೊಂಡು ಮುಕ್ಕಾಲು ಶತಮಾನವಾಗುತ್ತಿರುವಾಗಲೂ ಪೂರ್ಣವಾದ ಪ್ರಭುವಾಗಿ ಪ್ರಜೆ ಇನ್ನೂ ಪರಿವರ್ತನೆಗೊಂಡಿಲ್ಲವೆಂಬುದು ಕಹಿಸತ್ಯ. ಜಾತೀಯತೆ ಮತ್ತು ಕೋಮುವಾದ ಇನ್ನೂ ಕೆಲವೆಡೆ ಬೇರೂರಿಯೇ ಇದೆ. ಭ್ರಷ್ಟಾಚಾರ, ಅಧಿಕಾರ ದಾಹ, ಜಾತಿ-ಧರ್ಮ ಮೋಹಗಳ ಪಿಡುಗಿನಿಂದ ಪ್ರಜಾಪ್ರಭುತ್ವ ಅವನತಿಯತ್ತ ಸಾಗುತ್ತಿದೆ. ಅನೈತಿಕ ಮಾರ್ಗದಿಂದ ಚುನಾವಣೆ ಗೆಲ್ಲುವುದೂ ನಿರ್ಧಿಷ್ಟ ಸ್ಥಾನಗಳ ಕೊರತೆಯಿಂದ ಅಧಿಕಾರದಿಂದ ವಂಚಿತರಾಗುವಾಗ ಜಯಿಸಿದ ಅಭ್ಯರ್ಥಿಗಳನ್ನು ತಮ್ಮ ತೆಕ್ಕೆಗೆ ಕರೆಸುವುದೂ ಪ್ರಜಾಪ್ರಭುತ್ವಕ್ಕೆ ತದ್ವಿರುದ್ಧವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೋಮುಪ್ರೇರಿತ ಗಲಭೆಗಳು ನಡೆಯುತ್ತಲೇ ಇವೆ. ವಿಭಜಕ ಶಕ್ತಿಗಳು ದೇಶಾದ್ಯಂತ ದ್ವೇಷ ಹರಡುತ್ತಿದ್ದು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹಾನಿಯುಂಟುಮಾಡುತ್ತಿದ್ದಾರೆ. ರಾಜಕಾರಣಿಗಳಿಗೆ ಅಧಿಕಾರವೊಂದೇ ಗುರಿಯಾಗಿ ಬಿಟ್ಟಿದೆ. ಆದರೆ ಪ್ರಜಾಪ್ರಭುತ್ವ ಯಾವುದೇ ವ್ಯಕ್ತಿ ಅಥವಾ ವರ್ಗಗಳ ಹಿತಕ್ಕಾಗಿ ಶ್ರಮಿಸುವುದಲ್ಲ. ಬದಲಾಗಿ ಸರ್ವರಿಗೂ ಸಾಂವಿಧಾನಿಕ ರಕ್ಷಣೆ ನೀಡುವುದಾಗಿದೆ. ಒಟ್ಟಿಗೆ ಇಡೀ ಸಮಾಜದ ಕಲ್ಯಾಣವೇ ಪ್ರಜಾಪ್ರಭುತ್ವದ ಗುರಿ. ಎಕಾನಮಿಸ್ಟ್‌ ಇಂಟೆಲಿಜೆನ್ಸ್‌ ಯುನಿಟ್‌ (ಇಐಯು) ಪ್ರಕಟಿಸಿದ ಜಾಗತಿಕ ಪ್ರಜಾಪ್ರಭುತ್ವ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿತ ಕಂಡಿದೆ. ಇದರಿಂದ ದೇಶದ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂಬ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ರಾಜಕೀಯ ನೇತಾರರು ಹಾಗೂ ಪಕ್ಷಗಳು ದ್ವೇಷ ಬಿತ್ತುತ್ತಾ, ನಾಗರಿಕ ಸ್ವಾತಂತ್ರ್ಯವನ್ನು ನಿರಾಕರಿಸುತ್ತಿರುವ ಸೂಚಕವಿದು. ಹಸಿವು, ಬಡತನ, ಅಸ್ಪೃಶ್ಯತೆ, ನಿರುದ್ಯೋಗ, ಕೃಷಿಯ ಅನಿಶ್ಚಿತತೆಯಿಂದ ದೇಶವಿನ್ನೂ ಹೊರಬಂದಿಲ್ಲ. ಪ್ರಜೆಗಳ ಬೇಡಿಕೆಗೆ ಪೂರಕವಾದ ಸಂಪನ್ಮೂಲ ಮತ್ತು ಉದ್ಯೋಗದ ಕೊರತೆ ನಮ್ಮ ಮುಂದಿದೆ. ಜಗತ್ತಿನಲ್ಲೇ ವೇಗವಾಗಿ ಪ್ರಗತಿ ಹೊಂದುತ್ತಿರುವ ದೇಶವೆಂದು ಹೆಮ್ಮೆಯಿಂದ ಹೇಳುವಾಗಲೂ ಆರ್ಥಿಕ ಸ್ಥಿತಿ, ಉದ್ಯೋಗ ಸೃಷ್ಟಿ, ಆಹಾರಭದ್ರತೆ, ಬಡತನ ನಿರ್ಮೂಲನೆ ಮತ್ತು ಪರಿಸರ ಸಂರಕ್ಷಣೆಯ ವಿಷಯಗಳಲ್ಲಿ ಅಭದ್ರತೆಯತ್ತ ಸಾಗುತ್ತಿರುವ ಬಗ್ಗೆ ಜಾಗತಿಕ ಸಂಘಟನೆಗಳು ನೀಡಿದ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿದೆ.
ರಾಷ್ಟ್ರದ ಭಧ್ರತೆಗಾಗಿ ನೆಲೆಗೊಳ್ಳುವ ಸೈನಿಕರಿಗೂ ಅನ್ನದಾತರಾದ ರೈತರಿಗೂ ಅನ್ಯಾಯವಾಗುವ ನಿಲುವುಗಳು ಸರ್ಕಾರದಿಂದ ಉಂಟಾದರೆ ಅದು ರಾಷ್ಟ್ರಕ್ಕೇ ಕಟ್ಟಿಟ್ಟ ಬುತ್ತಿಯಾಗಿ ಪರಿಣಮಿಸುತ್ತದೆ. ಇತ್ತೀಚಿಗೆ ಕೃಷಿ ಕಾಯ್ದೆಯನ್ನು ಸದನದಲ್ಲಿ ಮಂಡಿಸಿದಾಗ ಅದರ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ರೈತರು ಕಾಯ್ದೆ ಮರಳಿಪಡೆಯುವಂತೆ ಒತ್ತಾಯಿಸಿ ಹೋರಾಟಕ್ಕಿಳಿದರು. ಆದರೂ ಸರ್ಕಾರ ಮಣಿಯಲಿಲ್ಲ, ಅಲ್ಲದೇ, ರೈತರ ವಿರುದ್ಧ ವ್ಯಾಪಕ ಅಕ್ರಮಕ್ಕೆ ಮುಂದಾದರು. ಅನ್ನದಾತರಾದ ಹಲವು ರೈತರು ಬಲಿಯಾದರು. ದುಡಿಯುವ ವರ್ಗದ ಮೇಲೆ ದಾಳಿ ನಡೆಸಿ, ದೌರ್ಜನ್ಯ ಪ್ರಶ್ನಿಸುವವರನ್ನು ಸಮಾಜಘಾತುಕ ಚಟುವಟಿಕೆ ತಡೆ (ಯುಎಪಿಎ) ಕಾಯ್ದೆಯಡಿ ಬಂಧಿಸಲಾಯಿತು. ಎಲ್ಲ ಹೋರಾಟಗಳನ್ನೂ ಹತ್ತಿಕ್ಕುವ ಪ್ರಯತ್ನ ನಡೆಯಿತು. ಕೊನೆಗೂ, ರೈತರ ಮನೋಧೈರ್ಯದ ಮುಂದೆ ಸರ್ಕಾರಕ್ಕೆ ಆ ಕಾಯ್ದೆಯನ್ನು ಹಿಂಪಡೆಯಲೇ ಬೇಕಾಯಿತು. ಕೆಲವು ಬಂಡವಾಳ ಶಾಹಿಗಳಿಗಾಗಿ ರಾಷ್ಟ್ರವನ್ನೇ ಒತ್ತೆಯಿಡುವುದರಿಂದ ರಾಜಕಾರಣಿಗಳು ಪ್ರಜಾಪ್ರಭುತ್ವಕ್ಕೆ ಸವಾಲೆಸಗಿದ್ದು ಇದರಿಂದ ಬಯಲಾಗಿದೆ. ಸ್ವಾತಂತ್ರ್ಯಾನಂತರ ಏಳು ದಶಕಗಳು ಉರುಳಿದರೂ ಜನರೊಂದಿಗೆ ಬೆಸೆಯುವ ಅಧಿಕಾರಿಗಳು ಹಾಗೂ ಪೋಲೀಸರು ಹಳೆಯ ರಾಜಾಡಳಿತ ಕಾಲದ ಅಧಿಕಾರಿಗಳಂತೆ ವರ್ತಿಸುವುದು ನಾವು ಕಾಣುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರಿಗಳು ಜನಸೇವಕರೇ ಹೊರತು ಜನರು ಅವರ ಸೇವಕರಲ್ಲ. ಕೆಳ ಮಟ್ಟದ ಸತ್ಯಾವಸ್ಥೆ ಇದಾಗಿದ್ದರೂ ಪ್ರಜಾಪ್ರಭುತ್ವ ಮಾದರಿ, ಸಂವಿಧಾನಕ್ಕೆ ಪೂರಕವಾಗಿ ಫಲಪ್ರದವಾಗಿ ನಡೆಸಿಕೊಂಡು ಬರಲು ದೇಶದ ಪ್ರಥಮ ಪ್ರಧಾನಿಯಂತಹ ಪೂರ್ವಿಕ ನೇತಾರರ ಸಾಮರ್ಥ್ಯದಿಂದ ಸಾಧ್ಯವಾದ್ದರಿಂದ ಚಲನಾತ್ಮಕ ಪ್ರಜಾಪ್ರಭುತ್ವದ ಗುಣಗಳನ್ನು ನಾವು ಪಡೆದಿದ್ದೇವೆ. ನಿಯಮ ನಿರ್ಮಾಣ ಸಭೆಗಳು, ನೀತಿನ್ಯಾಯ ವ್ಯವಸ್ಥೆ, ಆಡಳಿತ ನಿರ್ವಹಣಾ ವಿಭಾಗ ಹಾಗೂ ಮಾಧ್ಯಮ ವಿಭಾಗಗಳು ಆರೋಗ್ಯಕರವಾಗಿ ಪ್ರತಿವರ್ತಿಸುವುದರಿಂದ ನಾವು ಇಂದಿಗೂ ಪ್ರಜಾಪ್ರಭುತ್ವದ ಶುದ್ಧವಾಯು ಶ್ವಸಿಸುತ್ತಿದ್ದೇವೆ. ಈ ಎಲ್ಲಾ ವಿಭಾಗಗಳಲ್ಲೂ ನಿರ್ದಿಷ್ಟ ತಾತ್ಪರ್ಯಗಳ ಸಂರಕ್ಷಕರ ಹಿಡಿತ ಶಕ್ತವಾಗಿದ್ದರೂ ಪ್ರಜೆಗಳ ಸಂಘಟನಾ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದಿಂದ ಒಂದು ಹಂತದ ವರೆಗೆ ಪ್ರಜಾಪ್ರಭುತ್ವದ ಅಂತರೀಕ್ಷ ಇಂದಿಗೂ ಜೀವಂತವಾಗಿದೆ ಎನ್ನಬಹುದು. ವಿಖ್ಯಾತ ಸಾಮಾಚಿಕ ಕಾರ್ಯಕರ್ತೆ ಅರುಣಾ ರಾಯಿರವರು ರಾಜಸ್ಥಾನದ ಸದನದಲ್ಲಿ ಮಾಹಿತಿ ಹಕ್ಕು ಕಾಯ್ದೆಯನ್ನು ಅಂಗೀಕರಿಸಲು ಒತ್ತಾಯಿಸಿ ಕಾಯ್ದೆ ಅಂಗೀಕರಿಸಿದ್ದು ಪ್ರಜಾಪ್ರಭುತ್ವದ ಪಾಲಿಗೆ ದೊಡ್ಡ ಮೈಲಿಗಲ್ಲಾಯಿತು ಎನ್ನಬಹುದು. ನಂತರ ವಿವಿಧ ರಾಜ್ಯಗಳ ಸದನಗಳಲ್ಲೂ ಸಮಾನ ಕಾಯ್ದೆ ಅಂಗೀಕರಿಸಲಾಯಿತು ಹಾಗೂ ಪಾರ್ಲಿಮೆಂಟಿನಲ್ಲೂ ಇದು ಅಂಗೀಕಾರ ಕಂಡಿತು. ಇದರಿಂದ ಆಡಳಿತ ವ್ಯವಸ್ಥೆಯ ಎಲ್ಲಾ ಮಾಹಿತಿಗಳು ತಿಳಿಯಲು ಪ್ರಜೆಗಳಿಗೆ ಅವಕಾಶ ದೊರಕಿತು. ಭ್ರಷ್ಟಾಚಾರ ಹಾಗೂ ಅನೈತಿಕವಾಗಿ ಧನ ಕೂಡಿಡುವದಕ್ಕೆ ಇದು ಕಡಿವಾಣ ಹಾಕಿತು. ಬಹುಸಂಸ್ಕೃತಿಗಳಿಂದ ಕೂಡಿದ ಭಾರತದಲ್ಲಿ ಇದೀಗ ಏಕೀಕೃತ ಹಿಂದುತ್ವ ದೇಶೀಯತೆಯನ್ನು ಹೇರುವ ಪ್ರಯತ್ನ ನಡೆಯುತ್ತಿದೆ. ಹಿಂದೆಯೂ ಸಮಾನವಾದ ಪ್ರಯತ್ನ ನಡೆದಿದ್ದರೂ ಜಾತ್ಯಾತೀತ ವಿಶ್ವಾಸಿಗಳ ಪ್ರತಿರೋಧದಿಂದ ಅದು ಸಫಲವಾಗಲಿಲ್ಲ. ಆದರೆ ಇದೀಗ ಹಿಂದುತ್ವ ಅಜೆಂಡಾವನ್ನು ಕಾರ್ಯರೂಪಕ್ಕೆ ತರಲು ಸರ್ವವಿಧದ ಸನ್ನಾಹ ತೆರೆಮರೆಯಲ್ಲಿ ನಡೆಯುತ್ತಿದೆ. ರಾಷ್ಟ್ರ ನಿರ್ಮಾಣ ಮಾಡಿದ ನಾಯಕರುಗಳ ಕನಸುಗಳ ತದ್ವಿರುದ್ಧವೂ ಭಾರತ ಹಿಂದಿನಿಂದಲೂ ಉಳಿಸಿ ಬರುತ್ತಿರುವ ಬಹುತ್ವದಲ್ಲಿನ ಏಕತೆಗೆ ಇದು ಮಾರಕವೂ ಆಗಿದೆ. ಮಹಾತ್ಮಾ ಗಾಂಧಿಯೂ ಮೌಲಾನಾ ಆಝಾದರೂ ಪಂಡಿತ್ ನೆಹರೂ ರವರೂ ಕನಸು ಕಂಡ ಕೋಮು ದ್ವೇಷದಿಂದ ಅನ್ಯವಾದ, ಪರಸ್ಪರ ಸ್ನೇಹದಿಂದ ಬೆಸೆಯುವ ಹಿಂದೂ ಮುಸಲ್ಮಾನ ಕ್ರೈಸ್ತ ಸಿಖರ ಭಾರತದ ನಿರ್ಮಾಣಕ್ಕಾಗಿ ನಮಗೊಟ್ಟಾಗಿ ಪಣತೊಡೋಣ. ಅಲ್ಲಾಹನು ಅನುಗ್ರಹಿಸಲಿ. ಆಮೀನ್.

Comments

Popular Posts