ಸಮನ್ವಯ ಶಿಕ್ಷಣದ ಹರಿಕಾರ: ಚೀಕಿಲೋಟ್ ಕುಂಞಮ್ಮದ್ ಮುಸ್ಲಿಯಾರ್ (ನ. ಮ)
ಎರಡನೇ ಪೊನ್ನಾನಿ ಎಂದು ಖ್ಯಾತಿ ಇರುವ ನಾದಾಪುರಂ ಈ ಹೆಸರು ಪಡೆಯಲು ಮುಖ್ಯಪಾತ್ರ ವಹಿಸಿದ್ದು ಸಮೀಪ ಪ್ರದೇಶವಾದ ಕಡಮೇರಿ. ಇದು ಹತ್ತಾರು ಉಲಮಾ ಕುಟುಂಬಂಗಳ ತವರೂರು. ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣವನ್ನು ಒಂದೇ ಸೂರಿನಡಿ ನೀಡುವ ಕೇರಳದ ಪ್ರಥಮ ವಿದ್ಯಾಲಯ ರಹ್ಮಾನಿಯ್ಯದ ಮೂಲಕ ಖ್ಯಾತಿವೆತ್ತ ಗ್ರಾಮ.
ಹಿಂದಿನ ಸೂಕ್ಷ್ಮಶಾಲಿಗಳಾದ ಉಲಮಾ ದಿಗ್ಗಜರಿಂದ ಉಂಟಾದ ಹಿರಿಮೆ ಮತ್ತು ಘನತೆಯನ್ನು ಇನ್ನೂ ಆ ಪ್ರದೇಶದಲ್ಲಿ ಉಳಿಸಲು ರಹ್ಮಾನಿಯ್ಯಃ ಕಾರಣವಾಯಿತು. ಈ ಸಂಸ್ಥೆಯ ಶಿಲ್ಪಿಯೇ ಚೀಕಿಲೋಟ್ ಕುಂಞಮ್ಮದ್ ಮುಸ್ಲಿಯಾರ್ ಎಂಬ ಸಾತ್ವಿಕ ಸೂಫೀ ನೇತಾರ.
'ಚೀಕಿಲೋಟೋರ್' ಎಂಬ ನಾಮದಲ್ಲಿ ಪ್ರಸಿದ್ಧಿ ಹೊಂದಿದ್ದ ಚೀಕಿಲೋಟ್ ಕುಂಞಬ್ದುಲ್ಲ ಮುಸ್ಲಿಯಾರ್ ಹಾಗೂ ಬಿಯ್ಯಾತು ದಂಪತಿಗಳ ಎಂಟು ಮಕ್ಕಳಲ್ಲಿ ಏಕ ಪುತ್ರನಾಗಿದ್ದರು 'ರಹ್ಮಾನಿಯ್ಯಃ' ಸ್ಥಾಪಕ ಚೀಕಿಲೋಟ್ ಕುಂಞಮ್ಮದ್ ಮುಸ್ಲಿಯಾರ್.
1925 ಫೆಬ್ರವರಿ 20 ರಂದು ಚೀಕಿಲೋಟ್ ಮನೆತನದಲ್ಲಿ ಇವರು ಜನ್ಮ ತಾಳಿದರು.
ಕುಂಞಮ್ಮದ್ ಮುಸ್ಲಿಯಾರರು ಅರಿವಿನ ವಿಶಾಲ ಆಕಾಶವೇನೂ ಕಂಡವರಲ್ಲ. ಆದರೂ ನಿಷ್ಕಲ್ಮಶ ಕರ್ಮಗಳಿಂದ ಅರಿವನ್ನು ಜೀವನದೊಂದಿಗೆ ಹೊಂದಿಸಲು ಯಶಸ್ವಿಯಾದ ಸಾತ್ವಿಕರು ಅವರು.
ಪ್ರಾಥಮಿಕ ಕಲಿಕೆಯ ನಂತರ ತಂದೆಯ ಸಹೋದರ ಚಿರಕ್ಕಲ್ ಅಬ್ದುರ್ರಹ್ಮಾನ್ ಮುಸ್ಲಿಯಾರರ ವಿಲ್ಯಾಪಳ್ಳಿ, ತಳಿಪ್ಪರಂಬ್ ದರ್ಸುಗಳಲ್ಲಿ ವಿದ್ಯಾರ್ಜನೆಗೈದರು. ನಂತರ ಮಲಪ್ಪುರಂ ಜಿಲ್ಲೆಯ ವೇಂಙರ ಸಮೀಪದ ಕೋಟುಮಲ ಎಂಬಲ್ಲಿ ಕೋಟುಮಲ ಅಬೂಬಕರ್ ಮುಸ್ಲಿಯಾರರ ದರ್ಸಿಗೆ ಸೇರಿದರು. ಇ.ಕೆ. ಹಸನ್ ಮುಸ್ಲಿಯಾರ್, ಎಂ.ಎಂ. ಬಶೀರ್ ಮುಸ್ಲಿಯಾರ್ ಸಹಿತ ಪ್ರಮುಖರು ಅಂದು ಸಹಪಾಠಿಗಳಾಗಿದ್ದರು. ನಂತರದ ದಶಕಗಳಲ್ಲಿ ಹಲವಾರು ಸಾಮೂಹಿಕ ಸಾಮುದಾಯಿಕ ಬೆಳವಣಿಗೆಗೆ ಚುಕ್ಕಾಣಿ ಹಿಡಿದದ್ದು ಈ ದರ್ಸಿನಲ್ಲಿ ಕಲಿತವರು ಎಂಬುದು ಸ್ಮರಣೀಯ. ಸ್ಮರ್ಯ ಕುಂಞಮ್ಮದ್ ಮುಸ್ಲಿಯಾರ್ ರವರ ತಂದೆ 'ಚೀಕಿಲೋಟೋರ್' ರೋಗಗ್ರಸ್ತನಾದಾಗ ಕುಟುಂಬದ ಹೊರೆ ಏಕೈಕ ಪುತ್ರನಾದ ತನ್ನ ಹೆಗಲ ಮೇಲಾಯಿತು. ನಂತರ ಅವರಿಗೆ ಓದು ಮುಗಿಸಿ ಕುಟುಂಬದ ಭಾರವನ್ನು ಹೊರಬೇಕಾಯಿತು. ಜೊತೆಗೆ ಸಾಮೂಹ್ಯ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡರು. ಬಡಬಗ್ಗರ ಕಣ್ಣೀರೊರೆಸುವುದು ತನ್ನ ಬಾಧ್ಯತೆಯಾಗಿ ಕಂಡರು. ಹಲವರ ಮನೆನಿರ್ಮಾಣಕ್ಕೆ ನೆರವಾದರು. ಹಲವು ಕುಟುಂಬಗಳಿಗೆ ಆಸರೆಯಾದರು.
ಅದು ಎಪ್ಪತ್ತರ ದಶಕದ ಪ್ರಾರಂಭ ಕಾಲ. ಹೌದು, ಊರೂರುಗಳಲ್ಲಿ ಪಳ್ಳಿದರ್ಸುಗಳು ತುಂಬಿದ್ದ ಸಮಯ. ಮಹೋನ್ನತ ವಿದ್ವಾಂಸ ಶ್ರೇಷ್ಟರಿಂದ ಪ್ರಶೋಭಿತವಾದ ದರ್ಸುಗಳು. ಆದರೆ ಕಾಲಚಕ್ರ ಉರುಳುತ್ತಿರುವಂತೆ ಶೋಷಣೆಗೆ ಒಳಗಾಗುತ್ತಿರುವ ದರ್ಸುಗಳು, ಧಾರ್ಮಿಕ ವಲಯದಿಂದ ದೂರವಾಗುತ್ತಿರುವ ನವಪೀಳಿಗೆ, ಒಂದೆಡೆ ನವೀನ ಸಿದ್ಧಾಂತಗಳನ್ನು ಪ್ರಚುರಪಡಿಸುವವರ ಕಾಟ. ಇದಕ್ಕೆಲ್ಲಾ ಒಂದು ಪರಿಹಾರ ಕಂಡೇ ಸಿದ್ಧ ಎಂಬ ಕುಂಞಮ್ಮದ್ ಮುಸ್ಲಿಯಾರರ ಗಟ್ಟಿನಿಲುವಿನಲ್ಲಿ 'ರಹ್ಮಾನಿಯ್ಯಃ' ಎಂಬ ಅಕ್ಷರ ತಾಣ 1972 ರಲ್ಲಿ ಜನ್ಮ ತಾಳಿತು.
ಇಂಗ್ಲೀಷ್, ಉರ್ದು ಕಲಿಕೆ ಅಂದಿನ ದರ್ಸ್ ಅಧ್ಯಯನದಲ್ಲಿ ಅನ್ಯವಾಗಿತ್ತು. ಬೆಂಚ್-ಡೆಸ್ಕುಗಳು, ಬ್ಲ್ಯಾಕ್ ಬೋರ್ಡ್ ಬಳಕೆಯೂ ಅಂದು ಚಾಲ್ತಿಯಲ್ಲಿರಲಿಲ್ಲ. ಈ ಪರಿಮಿತಿಗಳಿಂದ ಮುಕ್ತವಾದ ಅವಶ್ಯಕವಾದ ಲೌಕಿಕ ವಿದ್ಯೆಯನ್ನು ತನ್ನ ಕಾಲೇಜಿನಲ್ಲಿ ನೀಡುವಲ್ಲಿ ಚೀಕಿಲೋಟ್ ಕುಂಞ್ಞಮ್ಮದ್ ಮುಸ್ಲಿಯಾರ್ ಸಫಲರಾದರು. ಪಾರಂಪರಿಕ ರಿವಾಜಿನಿಂದ ಹೊಸ ದಾರಿ ಹಿಡಿದಿದ್ದರಿಂದ ಅದು ಅಷ್ಟು ಸುಲಭವಾಗಿರಲಿಲ್ಲ. ಎಲ್ಲಾ ದಿಕ್ಕುಗಳಿಂದ ವಿಮರ್ಶೆಗಳು ಬಂದರೂ ಅದನ್ನು ಮೆಟ್ಟಿನಿಂತು ತನ್ನ ಕನಸನ್ನು ಸಾಧಿಸಿಯೇ ಬಿಟ್ಟರು. ವಿಮರ್ಶೆಗಳು ಏನೇ ಇದ್ದರೂ ತನ್ನ ನಿಯ್ಯತಿನ ನಿಷ್ಕಪಟತೆ ಗುರಿಸಾಧಿಸುವಲ್ಲಿಗೆ ಅವರನ್ನು ತಲುಪಿಸಿತು.
ಅದು 1972 ಜನವರಿ 30. ಕೋಝಿಕ್ಕೋಡ್ ಜಿಲ್ಲೆಯ ವಡಗರ ತಾಲೂಕಿನ ವಿದ್ವಾಂಸರೂ, ಸಾದಾತರೂ, ಪೌರಪ್ರಮುಖರೂ ಕಡಮೇರಿ ಜುಮಾ ಮಸೀದಿಯಲ್ಲಿ ಜಮಾಯಿಸಿದ ದಿನ. ಬೃಹತ್ ಉಲಮಾ - ಉಮರಾ ಸಮಾವೇಶಕ್ಕೆ ಅಂದು ಕಡಮೇರಿ ಸಾಕ್ಷಿಯಾಗಿತ್ತು. ಮೇರು ಪಂಡಿತರಾಗಿದ್ದ ಚಿರಕ್ಕಲ್ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಹಾಗೂ ಕೀಝನ ಕುಂಞಬ್ದುಲ್ಲ ಮುಸ್ಲಿಯಾರ್ ರವರ ಸಹಿ ಇರುವ ಆಹ್ವಾನ ಪತ್ರಿಕೆ ಲಭಿಸಿದ ನೂರಾರು ಜನ ಅಲ್ಲಿ ಸೇರಿದ್ದರು. ಸಭೆಯಲ್ಲಿ ಸ್ಮರ್ಯ ಪುರುಷರ ಗುರುವರ್ಯರಾಗಿದ್ದ ಕೋಟುಮಲ ಅಬೂಬಕರ್ ಮುಸ್ಲಿಯಾರ್ ಎರಡು ಗಂಟೆ ಕಾಲ ಸುಧೀರ್ಘ ಭಾಷಣಗೈದರು.
ಶುಷ್ಕಗೊಳ್ಳುತ್ತಿರುವ ದರ್ಸುಗಳಿಗೆ ನವಜೀವ ನೀಡಲು ಪಾರಂಪರಿಕ ದರ್ಸೀ ಅಧ್ಯಯನದ ಜೊತೆಗೆ ಲೌಕಿಕ ಶಿಕ್ಷಣವನ್ನೂ ನೀಡುವ ಒಂದು ಕಾಲೇಜಿನ ಅನಿವಾರ್ಯತೆ ಒತ್ತಿ ಹೇಳಿದ ಭಾಷಣ. ತರುವಾಯ, ಸಭಿಕರು ಅದರ ನನಸಿಗಾಗಿ ಧೃಡಸಂಕಲ್ಪಗೈದರು.
ಕಾರ್ಯಾಟ್ ಕುಞಮ್ಮದ್ ಹಾಜಿಯೆಂಬ ಪೌರಪ್ರಮುಖರು ಸಂಸ್ಥೆಗೆ 'ರಹ್ಮಾನಿಯ್ಯಃ' ಎಂದು ನಾಮಕರಣ ಮಾಡಬೇಕು ಎಂಬ ನಿರ್ದೇಶವಿಟ್ಟರು. ಕಡಮೇರಿ ಮೊಹಲ್ಲಾದ ಖಾಝಿಯಾಗಿದ್ದ ಚಿರಕ್ಕಲ್ ಅಬ್ದುರ್ರಹ್ಮಾನ್ ಮುಸ್ಲಿಯಾರ್ ರವರ ಹೆಸರಿಗೆ ಹೊಂದಿಸಿ ಆ ನಾಮಕರಣ ಮಾಡಲಾಯಿತು.
ಚಾಪನಂಙಾಡಿ ಬಾಪು ಮುಸ್ಲಿಯಾರರ ದುಆ ಮತ್ತು ಆಶೀರ್ವಾದ ಪಡೆದು 1972 ಮೇ 1 ಕ್ಕೆ ಸಯ್ಯಿದ್ ಅಬ್ದುರ್ರಹ್ಮಾನ್ ಬಾಫಖಿ ತಂಙಳ್ ರವರ ಉಪಸ್ಥಿತಿಯಲ್ಲಿ ಸಯ್ಯಿದ್ ಪಿ.ಎಂ.ಎಸ್.ಎ. ಪೂಕೋಯ ತಂಙಳ್ ರವರ ಪುಣ್ಯಹಸ್ತದಿಂದ ಸಂಸ್ಥೆಯ ಶಿಲಾನ್ಯಾಸ ನೆರವೇರಿತು. ಅದೇ ವರ್ಷ ನವೆಂಬರ್ 22 ಕ್ಕೆ ರಈಸುಲ್ ಮುಹಖಿಖೀನ್ ಕಣ್ಣಿಯತ್ ಉಸ್ತಾದರು ಫತ್'ಹುಲ್ ಮುಈನ್ ಗ್ರಂಥವನ್ನು ಓದಿಕೊಡುವುದರೊಂದಿಗೆ ಸಂಸ್ಥೆಯ ಅಧಿಕೃತ ತರಗತಿ ಪ್ರಾರಂಭಗೊಂಡಿತು. ಉದ್ದೇಶ ಸಾಫಲ್ಯದ ಸಂತಸದಲ್ಲಿ ಅಲ್ಲೇ ಕುಗ್ಗದೆ ಕಾಲೇಜಿನ ಪ್ರತಿದಿನ ಖರ್ಚು ನಿಭಾಯಿಸಲು ಕುಂಞಮ್ಮದ್ ಮುಸ್ಲಿಯಾರ್ ಕಾರ್ಯಪ್ರವೃತ್ತರಾದರು. ಒಂದು ಬ್ಯಾಗನ್ನು ಹಿಡಿದು ಮನೆ ಮನೆಗಳ ಮೆಟ್ಟಿಲೇರಿದರು. ಶ್ರೀಮಂತವೂ ಕುಲೀನವೂ ಆದ ಕುಟುಂಬದಲ್ಲಿ ಜನಿಸಿದ ಅವರಿಗೆ ಹಲವರ ಅಪಹಾಸ್ಯ ಎದುರಿಸಬೇಕಾಯಿತು. ಯಾವುದೇ ಪರಿಹಾಸ ಉಪಹಾಸಗಳಿಗೆ ಎದೆಗುಂದದೆ ಅವರು ಸಧೈರ್ಯ ಮುನ್ನುಗ್ಗಿದರು.
1973 ರಲ್ಲಿ ಸಮಸ್ತದ 'ಮಾಸ್ಟರ್ ಬ್ರೈನ್' ಎಂಬ ಖ್ಯಾತಿ ಹೊಂದಿದ್ದ ಎಂ. ಎಂ. ಬಶೀರ್ ಮುಸ್ಲಿಯಾರ್ ಸಂಸ್ಥೆಯ ಪ್ರಾಂಶುಪಾಲರಾಗಿ ಬಂದ ನಂತರ ತನ್ನ ಕನಸಿನೆಡೆಗಿನ ಪ್ರಯಾಣ ಸುಗಮವಾಯಿತು. ಮುಂದೆ ಪಾರಂಪರಿಕ ಸಂಪ್ರದಾಯವನ್ನು ಉಳಿಸಿಕೊಂಡೇ ಹತ್ತು ಹಲವು ನೂತನ ಪರಿಷ್ಕಾರಗಳಿಗೆ ಕಾಲೇಜು ಸಾಕ್ಷಿಯಾಯಿತು. ಬಷೀರ್ ಉಸ್ತಾದರು ತನ್ನ ಮರಣದವರೆಗೂ ಕಾಲೇಜಿನ ಪ್ರಾಂಶುಪಾಲರಾಗಿ ಹುದ್ದೆಯಲ್ಲಿದ್ದರು.
1980 ರಲ್ಲಿ ಆಕ್ಟಿಂಗ್ ಪ್ರಿನ್ಸಿಪಾಲರಾಗಿ ಕೋಟುಮಲ ಬಾಪು ಉಸ್ತಾದ್ ನೇಮಕಗೊಂಡ ಬಳಿಕ ಕುಂಞಮ್ಮದ್ ಮುಸ್ಲಿಯಾರರಿಗೆ ಇನ್ನಷ್ಟು ಬಲ ಬಂದಂತಾಯಿತು. ಫಲವಾಗಿ, ಕಾಲೇಜು ಉತ್ತುಂಗದಿಂದ ಉತ್ತುಂಗಕ್ಕೆ ಬಹುಬೇಗ ಏರಿತು. ಶೈಕ್ಷಣಿಕವಾಗಿಯೂ ಆರ್ಥಿಕವಾಗಿಯೂ ಕಾಲೇಜು ಇನ್ನಷ್ಟು ಧೃಢವಾಯಿತು.
ಇದೀಗ ಸಂಸ್ಥೆಯು ಅರಬಿಕ್ ಕಾಲೇಜಿನ ಹೊರತಾಗಿ, ರಹ್ಮಾನಿಯ್ಯಃ ಲೀಡಿಂಗ್ ಸ್ಕೂಲ್, ರಾಳಿಯಃ ಮಹಿಳಾ ಕಾಲೇಜು, ಪಬ್ಲಿಕ್ ಸ್ಕೂಲ್, ಹಯರ್ ಸೆಕಂಡರಿ ಸ್ಕೂಲ್, ಕಂಪ್ಯೂಟರ್ ಎಂಡ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್, ಶೈಖುನಾ ಬಾಪು ಉಸ್ತಾದ್ ಸ್ಮಾರಕ ತಿಯೋಪಾರ್ಕ್ ಸಹಿತ ವಿವಿಧ ಸಂಸ್ಥೆಗಳ ಒಕ್ಕೂಟವಾಗಿ ಬೆಳೆದು ನಿಂತಿದೆ. ರಹ್ಮಾನಿಯ್ಯದಲ್ಲಿ ಕಲಿತು 'ರಹ್ಮಾನಿ' ಪದವಿ ಪಡೆದ ನೂರಾರು ವಿದ್ವಾಂಸರು ದೇಶ ಹಾಗೂ ವಿದೇಶಗಳಲ್ಲಿ ಕುಂಞಮ್ಮದ್ ಮುಸ್ಲಿಯಾರರ ಕನಸಿನ ನನಸಾಗಿ ಧಾರ್ಮಿಕ, ಸಾಮೂಹಿಕ, ಶೈಕ್ಷಣಿಕ, ಸರಕಾರಿ ಸೇವೆಗಳಲ್ಲಿದ್ದಾರೆ.
ಕೇರಳದ ಧಾರ್ಮಿಕ ಶಿಕ್ಷಣ ರಂಗಕ್ಕೆ ಹೊಸ ಅಧ್ಯಾಯ ಪರಿಚಯಿಸಿದ ರಹ್ಮಾನಿಯ್ಯದ ಬಾನೀ ಹಝ್ರತ್ ಚೀಕಿಲೋಟ್ ಕುಂಞಮ್ಮದ್ ಮುಸ್ಲಿಯಾರರು 1987 ಸೆಪ್ಟಂಬರ್ 25 / 1408 ಸಫರ್ 2 ಕ್ಕೆ ಇಹಲೋಕ ವಾಸ ತ್ಯಜಿಸಿದರು. ಕಡಮೇರಿ ಜುಮಾ ಮಸೀದಿ ಖಬರ್ ಸ್ಥಾನದಲ್ಲಿ ಅಂತ್ಯೆನಿದ್ರೆಗೊಳ್ಳುತ್ತಿದ್ದಾರೆ. ಅಲ್ಲಾಹು ನಮ್ಮನ್ನು ಅವರ ಜೊತೆ ಸ್ವರ್ಗೀಯ ಉದ್ಯಾನದಲ್ಲಿ ಜೊತೆಸೇರಿಸಲಿ - ಆಮೀನ್.
✍🏼 ಹಾಷಿಂ ರಹ್ಮಾನಿ ಸಾಲ್ಮರ.


Comments
Post a Comment